Climate Change Energy Efficiency Renewable Energy Smart Cities Water & Sanitation

30 x 40 ಚದರ ಅಡಿಯ ನಿವೇಶನಗಳ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ವಿಧಾನ ಕಡ್ಡಾಯ, ಜಲ ಮಂಡಳಿಯ ಹೊಸ ಯೋಜನೆಗೆ ಅಸ್ತು ಅನ್ನುವನೇ ಶ್ರೀಸಾಮಾನ್ಯ?

ಉತ್ತರ ಕರ್ನಾಟಕ್ಕೆ ಆವರಿಸಿರುವ ಬರದ ಛಾಯೆ ಇನ್ನು ಕೆಲವು ವರ್ಷಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲೂ ಆವರಿಸಲಿದೆ.

Rain Water Harvesting
RWH

ರಾಜಧಾನಿ ಬೆಂಗಳೂರಿನಲ್ಲಿಯೂ ನೀರಿನ ಅಭಾವ ಕಂಡುಬರುತ್ತಿರುವ ಹಿನ್ನಲೆಯಲ್ಲಿ 30 x 40 ಚದರ ಅಡಿಯ ನಿವೇಶನದ ಕಟ್ಟಡಗಳಿಗೆ ಮಳೆ ನೀರು ಕೊಯ್ಲು (ಆರ್​ ಡಬ್ಲ್ಯೂಎಚ್) ವಿಧಾನ ಕಡ್ಡಾಯಗೊಳಿಸಲು ಬಿಡಬ್ಲ್ಯೂಎಸ್​ ಎಸ್​ ಬಿ ಆಲೋಚನೆ ಮಾಡುತ್ತಿದ್ದು ಈ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆದಿದೆ.

ಮಳೆ ನೀರು ಕೊಯ್ಲು ಎಂದರೇನು ಎಂದು ಹುಬ್ಬೇರಿಸುವ ಸಿಲಿಕಾನ್​ ಸಿಟಿ ಮಂದಿಗೆ ತಾವು ಅನುಭವಿಸುತ್ತಿರುವ ನೀರಿನ ಅಭಾವದ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿಲ್ಲ. ಈ ನಿಟ್ಟಿನಲ್ಲಿ ಆರ್​ ಡಬ್ಲ್ಯೂ ಎಚ್​​ ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನೀರು ಸರಬರಾಜು ಮಂಡಳಿ ತೀರ್ಮಾನಿಸಿದೆ. ಪ್ರಸ್ತುತ, 60 x 40 ಚದರ ಅಡಿ ನಿವೇಶನಗಳು ಮತ್ತು ಹೆಚ್ಚಿನ ಪ್ರದೇಶದಲ್ಲಿನ ಕಟ್ಟಡಗಳಿಗೆ ನೀರು ಕೊಯ್ಲು ಮಾಡುವುದು ಕಡ್ಡಾಯವಾಗಿತ್ತು. ಈಗ ಜಲ ಮಂಡಳಿಯ ಹೊಸ ಶಿಫಾರಸಿನ ಪ್ರಕಾರ 30 x 40 ರ ನಿವೇಶನದ ಕಟ್ಟಡಗಳಿಗೂ ಇದನ್ನು ಕಡ್ಡಾಯಗೊಳಿಸಬೇಕು ಎಂಬ ಪ್ರಸ್ತಾವನೆ ಮಂಡಿಸಿದೆ.

ಮಳೆಯ ನೀರು ಸಂಗ್ರಹದ ಬಗ್ಗೆ ಅನಾಸಕ್ತಿ ತೋರಿರುವ ಬೆಂಗಳೂರಿಗರಿಗೆ ತಾವು ದಂಡ ಕಟ್ಟಿದರೂ ಪರವಾಗಿಲ್ಲ, ಕಟ್ಟಡಗಳಿಗೆ ನೀರು ಕೊಯ್ಲು ಮಾಡಿಸುವುದಿಲ್ಲ ಎಂಬ ಧೋರಣೆ ತಾಳಿದ್ದಾರೆ.
ಈಗ ಅರ್ಧ ನಿವೇಶನಗಳಿಗೆ ನೀರು ಸಂಗ್ರಹದ ಕಡ್ಡಾಯ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಎಂದು ಕಾದು ನೋಡಬೇಕಿದೆ.

ಕಳೆದ ವರ್ಷ ಮಂಡಿಸಿದ ಎನ್‌ಐಟಿಐ ಆಯೋಗದ ವರದಿಯ ಪ್ರಕಾರ 2020 ರ ವೇಳೆಗೆ ಬೆಂಗಳೂರು ತನ್ನ ಅಂತರ್ಜಲ ಮಟ್ಟವನ್ನು ಸಂಪೂರ್ಣ ಕಳೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಈ ಹಿನ್ನಲೆಯಲ್ಲಿ ಕಟ್ಟಡಗಳಿಗೆ ನೀರು ಕೊಯ್ಲುವನ್ನು ಕಡ್ಡಾಯಗೊಳಿಸುವಂತೆ ಅಂತರ ವಿಭಾಗೀಯ ಸಮಿತಿ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾದ ಟಿ ಎಂ ವಿಜಯ ಭಾಸ್ಕರ್​ ಆದೇಶಿಸಿದ್ದಾರೆ. ಇದನ್ನು ತಕ್ಷಣದಿಂದ ಜಾರಿಗೆ ತರುವಂತೆ ಜಲ ಮಂಡಳಿಯ ಅಧ್ಯಕ್ಷ ತುಷಾರ್​​ ಗಿರಿನಾಥ್​ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಎನ್​ ಮಂಜುನಾಥ್​ ಪ್ರಸಾದ್​ ಅವರಿಗೆ ಪತ್ರ ಬರೆದಿದ್ದು ಆದೇಶಕ್ಕೆ ನಗರಸಭೆಯಿಂದ ಅನುಮೋದನೆ ಮತ್ತು ಕಟ್ಟಡದ ಉಪ ಕಾನೂನುಗಳಿಗೆ ಅಗತ್ಯ ತಿದ್ದುಪಡಿ ತರುವ ಬಗ್ಗೆ ತಿಳಿಸಿದ್ದಾರೆ.

ಈ ಹಿಂದೆ 2,325 ಚದರ ಅಡಿ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣವಿರುವ ನಿವೇಶನಗಳಿಗೆ ನೀರು ಕೊಯ್ಲು ಕಡ್ಡಾಯವಾಗಿತ್ತು, ಆದರೆ ಈಗ 1,162.5 ವಿಸ್ತೀರ್ಣವಿರುವ ನಿವೇಶನಗಳಿಗೆ ಆರ್​ ಡಬ್ಲ್ಯೂಎಚ್ ಕಡ್ಡಾಯಗೊಳಿಸಲಾಗುತ್ತಿದೆ. ಈ ಯೋಜನೆ ಮೂಲಕ ಸಂಗ್ರಹವಾಗುವ ಮಳೆನೀರಿನ ಮೂಲಕ ರಾಜಧಾನಿಯಲ್ಲಿ ಅಂತರ್ಜಲ ಮಟ್ಟವನ್ನು ಭಾಗಶಃ ಪುನಶ್ಚೇತನಗೊಳಿಸಬಹುದಾಗಿದೆ. ಆರ್‌ಡಬ್ಲ್ಯುಎಚ್‌ನ ಶೇಖರಣಾ ಸಾಮರ್ಥ್ಯವು ಪ್ರತಿ ಚದರಕ್ಕೆ 60 ಲೀಟರ್ ಅಥವಾ ಅದಕ್ಕಿಂತ ಹೆಚ್ಚು ಮತ್ತು ಪ್ರತಿ ಚದರಕ್ಕೆ 30 ಲೀಟರ್ ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು ಎಂದು ಯೋಜನೆಯ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.
“ನೀರು ಕೊಯ್ಲು ವ್ಯವಸ್ಥೆಯನ್ನು ಇನ್ನೂ ಸ್ಥಾಪಿಸದ ದೇಶೀಯ ಮತ್ತು ದೇಶೀಯವಲ್ಲದ ಗ್ರಾಹಕರಿಗೆ ದಂಡವನ್ನು ಹೆಚ್ಚಿಸುವ ಜಲಮಂಡಳಿಯ ಪ್ರಸ್ತಾಪವು ಸರ್ಕಾರದ ಮುಂದೆ ಇನ್ನೂ ಬಾಕಿ ಇದೆ,” ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ಬಿಡಬ್ಲ್ಯೂಎಸ್​ ಎಸ್​ ಬಿಯ ಮಳೆ ನೀರು ಕೊಯ್ಲು ಸಂಬಂಧದ ಉಪ ಕಾನೂನುಗಳನ್ನು ಪಾಲಿಸಲು ವಿಫಲವಾದ 68 ಸಾವಿರ ಕಟ್ಟಡಗಳ ಬಗ್ಗೆ ವರದಿಯಾಗಿದೆ. ಇದಕ್ಕಾಗಿ ಜಲಮಂಡಳಿ ಕಟ್ಟಡಗಳಿಗೆ 30 ಕೋಟಿ ದಂಡವನ್ನು ವಿಧಿಸಿತ್ತು. ಇದರಲ್ಲಿ 27 ಕೋಟಿಯಷ್ಟು ಸಂಗ್ರಹಿಸಲಾಗಿದೆ.
ಈ ಹಿನ್ನಲೆಯಲ್ಲಿ ಈಗ ಜಲಮಂಡಳಿಯ ಹೊಸ ಪ್ರಸ್ತಾಪವಾದ 30 x 40 ಚದರ ಅಡಿಯ ನಿವೇಶನದ ಕಟ್ಟಡಗಳಿಗೆ ಮಳೆ ನೀರು ಕೊಯ್ಲು (ಆರ್​ ಡಬ್ಲ್ಯೂಎಚ್) ವಿಧಾನ ಕಡ್ಡಾಯ ಎಂಬ ಅಂಶ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಎಂಬುದು ಪ್ರಶ್ನಾರ್ಹವಾಗಿದೆ.

ಮಳೆ ನೀರು ಕೊಯ್ಲು ಎಂದರೆ

ಮಳೆ ನೀರು ಕೊಯ್ಲು ಎಂದರೇನು ಎಂದರೆ ಮಳೆನೀರನ್ನು ಒಟ್ಟುಗೂಡಿಸುವ ಅಥವಾ ಸಂಚಯನ ಮಾಡುವ ಮತ್ತು ಶೇಖರಿಸಿಟ್ಟುಕೊಳ್ಳುವ ಒಂದು ವಿಧಾನವಾಗಿದೆ.
ಕುಡಿಯುವ ನೀರನ್ನು ಒದಗಿಸಲು ಜಾನುವಾರುಗಳಿಗೆ ನೀರುಣಿಸಲು ನೀರಾವರಿಗಾಗಿ ನೀರಿನ ವ್ಯವಸ್ಥೆ ಮಾಡಲು ಅಥವಾ ಅಂತರ್ಜಲ ಪುನರ್ಭರ್ತಿ ಮಾಡಲು ನೀರು ಕೊಯ್ಲು ಪದ್ಧತಿಯನ್ನು ಬಳಸಿಕೊಂಡು ಬರಲಾಗಿದೆ. ಮನೆಗಳು, ಗುಡಾರಗಳು ಮತ್ತು ಸ್ಥಳೀಯ ಸಾರ್ವಜನಿಕ ಕಟ್ಟಡಗಳ ಛಾವಣಿಗಳಿಂದ ಅಥವಾ ವಿಶೇಷವಾಗಿ ಸಿದ್ಧಗೊಳಿಸಲಾದ ನೆಲದ ಪ್ರದೇಶಗಳಿಂದ ಸಂಗ್ರಹಿಸಲಾದ ಮಳೆನೀರು, ಕುಡಿಯುವ ನೀರಿಗೆ ತನ್ನದೇ ಆದ ಪ್ರಮುಖ ಕೊಡುಗೆಯನ್ನು ನೀಡಬಲ್ಲದು.
ಕೆಲವೊಂದು ಸಂದರ್ಭಗಳಲ್ಲಿ, ಮಳೆನೀರು ಮಾತ್ರವೇ ಲಭ್ಯವಿರುವ ಏಕೈಕ ಅಥವಾ ಮಿತವ್ಯಯದ ನೀರಿನ ಮೂಲವಾಗಿರಲು ಸಾಧ್ಯವಿದೆ. ಸ್ಥಳೀಯವಾಗಿ ದೊರೆಯುವ ಹೆಚ್ಚು ದುಬಾರಿಯಲ್ಲದ ಸಾಮಗ್ರಿಗಳಿಂದ ನೀರು ಕೊಯ್ಲಿನ ವ್ಯವಸ್ಥೆಗಳನ್ನು ಸರಳವಾಗಿ ನಿರ್ಮಿಸಬಹುದು ಮತ್ತು ಬಹುತೇಕ ವಾಸಯೋಗ್ಯ ತಾಣಗಳಲ್ಲಿ ಇವು ಬಳಸಲು ಸೂಕ್ತವಾಗಿವೆ.

Click here to read This Article on RWH in English/ಇಂಗ್ಲೀಷ್

About the author

Avatar

Shivaraj

Add Comment

Click here to post a comment